ಬೌದ್ಧಾವತಾರ
ವಿಷ್ಣುವಿನ ದಶಾವತಾರಗಳಲ್ಲಿ ಒಂಬತ್ತನೆಯದು. ಕೆಲವರು ಬುದ್ದನನ್ನು ಬಿಟ್ಟು ಬಲರಾಮನನ್ನು ಸೇರಿಸಿ ದಶಾವತಾರವನ್ನು ಪೂರ್ಣಮಾಡುವುದುಂಟು. ವಿಷ್ಣುಧರ್ಮಪುರಾಣದಲ್ಲಿ ಶುದ್ಧೋದನ ಸುತೋ ಬುದ್ದೋ ಭವಿಷ್ಯಾಮಿ ವಿಮತ್ಸರಃ ಬೌದ್ಧಧರ್ಮ ಮುಪಾಶ್ರಿತ್ಯ ಕರಿಷ್ಯೆ ಧರ್ಮದರ್ಶನಂ (ಅಧ್ಯಾಯ 68 ಶ್ಲೋಕ 70) ಎಂದಿರುವುದಲ್ಲದೆ ಭಾಗವತದಲ್ಲೂ ಬೌದ್ಧಾವತಾರದ ಉಲ್ಲೇಖವಿದೆ. ಆದರೆ ತಮಿಳು ಪ್ರಬಂಧದಲ್ಲಿ ಬೌದ್ಧಾವತಾರದ ಉಲ್ಲೇಖ ಕಂಡುಬರುವುದಿಲ್ಲ. ಕಲಿಯುಗದಲ್ಲಿ ಅತ್ಯಧಿಕವಾಗಿದ್ದ ಹಿಂಸೆಯೆಂಬ ದುಷ್ಕøತಿಯನ್ನು ನಾಶಮಾಡಿ ಅಹಿಂಸೆ ಎಂಬ ಪರಮಧರ್ಮವನ್ನು ಸಂಸ್ಥಾಪನೆ ಮಾಡುವುದರ ಮೂಲಕ ಸಾಧುಗಳನ್ನು ರಕ್ಷಿಸುವುದು ಬೌದ್ಧಾವತಾರದ ಮುಖ್ಯಗುರಿ. ರಾಮಾವತಾರ ಕೃಷ್ಣಾವತಾರಗಳು ಪೂರ್ಣಾವತಾರಗಳಾದರೆ ಬೌದ್ಧಾವತಾರ ಅಂಶಾವತಾರ. ಗ್ರಹಗಳಿಗೆ ದಶಾವತಾರ ದೇವತೆಗಳನ್ನು ತಿಳಿಸುವ ಸಂದರ್ಭದಲ್ಲಿ ಪರಾಶರರು ರಾಮಾವತಾರಃ ಸೂರ್ಯಸ್ಯ, ಚಂದ್ರಣ್ಯ ಯದುನಾಯಕಃ, ನೃಸಿಂಹೋ ಭೂಮಿಪುತ್ರಸ್ಯ, ಬುದ್ದಃ ಸೋಮಸುತಸ್ಯ ಚ ಎಂದು ತಿಳಿಸಿರುವಂತೆ ಬುದ್ಧ ಗ್ರಹಕ್ಕೆ ಪ್ರಧಾನ ದೇವತೆ ಬುದ್ದ. ಭಾಗವತದ ಮೊದಲನೆಯ ಸ್ಕಂಧ ಮೂರನೆಯ ಅಧ್ಯಾಯದಲ್ಲಿ ತತಃ ಕತಾ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಂ ಬುದ್ಧೋನಾಮ್ನಾಂ ಜನಸುತಃ ಕೀಕಟೇಷು ಭವಿಷ್ಯತಿ ಎಂದಿದೆ, ಶ್ರೀಧರ ಸ್ವಾಮಿಗಳ ಅಭಿಪ್ರಾಯದಂತೆ ಕೀಕಟದೇಶದ ಮಧ್ಯಪ್ರದೇಶವಾದ ಗಯೆಯಲ್ಲಿ ಬುದ್ಧನ ಆವಿರ್ಭಾವ ಎಂದು ಸ್ಪಷ್ಟಪಡುತ್ತದೆ. ಬುದ್ಧನಿಗೆ ಸರ್ವಜ್ಞ, ಸುಗತ ಧರ್ಮರಾಜ, ಭಗವಾನ್ ಇವೇ ಮೊದಲಾದ ಐವತ್ತಕ್ಕೂ ಹೆಚ್ಚು ಪ್ರತಿನಾಮಗಳಿರುವ ವಿಷಯ ಅಮರಸಿಂಹ, ರೋಮಚಂದ್ರರ ಶಬ್ದರತ್ನಾವಳಿ ಕೋಶಗಳಿಂದ ತಿಳಿದು ಬರುತ್ತದೆ. 	(ನೋಡಿ- ಬುದ್ಧ)
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ